For a better experience please change your browser to CHROME, FIREFOX, OPERA or Internet Explorer.

ಮಳೆಯ ಅವಾಂತರ : ಎಲ್ಲೆಲ್ಲಿ ಏನೇನು?

 

ಮಳೆಯ ಅವಾಂತರ : ಎಲ್ಲೆಲ್ಲಿ ಏನೇನು?

ಮುಂಗಾರು ಮಳೆ ಕೇವಲ ನಾಲ್ಕು ದಿನಗಳ ಅವಧಿಯಲ್ಲೇ ದೇಶದ 10ಕ್ಕೂ ಹೆಚ್ಚು ರಾಜ್ಯಗಳನ್ನು ಆವರಿಸಿ ಕೊನೆಗೂ ಕಾಡಿ, ಸತಾಯಿಸಿದೆ.

ರಾಜ್ಯದ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ 20 ದಿನಗಳಿಂದ 40-45 ಡಿಗ್ರಿಯಷ್ಟು ಬಿಸಿಲಿನ ತಾಪ ದಾಖಲಾಗಿತ್ತು. ಭಾನುವಾರ ಮಧ್ಯಾಹ್ನ, ರಾತ್ರಿಯಿಂದ ಬಿಟ್ಟು ಬಿಡದೆ ಒಂದೇ ದಿನ ಮಳೆ ಸುರಿದಿದ್ದರಿಂದ ಹಲವು ಕಡೆ ಅನಾಹುತಗಳನ್ನೂ ಸೃಷ್ಟಿಸಿದ್ದು, ಸಿಡಿಲು-ಗುಡುಗು ಸಹಿತ ಸುರಿದ ಮಳೆಗೆ ಐವರು ಬಲಿಯಾಗಿದ್ದಾರೆ. ಆದರೆ, ಅಂತೂ ಮಳೆ ಬಂತು ಎಂದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ನಿನ್ನೆ ಹಾಗೂ ಇಂದು ಬೆಳಗ್ಗೆ ಸುರಿದ ಮಳೆ ಎಲ್ಲೆಲ್ಲಿ ಏನೇನು ಮಾಡಿದೆ ಎಂಬುದರ ಸಂಪೂರ್ಣ ವರದಿ ಇಲ್ಲಿದೆ.

ಬಳ್ಳಾರಿ – ಆಂಧ್ರ ಸೇರಿದಂತೆ ಬಳ್ಳಾರಿ ಗಡಿಭಾಗದಲ್ಲಿ ಸುರಿದ ಮಳೆಗೆ ಸಿರಗುಪ್ಪ ತಾಲೂಕಿನ ರಾರಾವಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆ ಮೇಲೆ ತಡೆಗೋಡೆ ಇಲ್ಲದ ಕಾರಣ ರಸ್ತೆ ಕಾಣದೆ 2 ಲಾರಿ, 1 ಬಸ್ ಪಲ್ಟಿ ಹೊಡೆದಿದೆ. ಬಸ್ ಬೀಳುತ್ತಿದ್ದಂತೆ ಪ್ರಯಾಣಿಕರನ್ನು ಸ್ಥಳೀಯರು ಪಾರು ಮಾಡಿ ಭಾರೀ ಅನಾಹುತ ತಪ್ಪಿಸಿದ್ದಾರೆ. ಲಾರಿಯಲ್ಲಿದ್ದವರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ. ಪ್ರತಿ ವರ್ಷ ಮಳೆಯಿಂದ ಈ ರಾರಾವಿ ಸೇತುವೆ ಮಳೆಯಿಂದ ಅನಾಹುತಗಳಿಗೆ ಕಾರಣವಾಗುತ್ತಿದ್ದು, ಅನೇಕ ವರ್ಷಗಳಿಂದ ಸೇತುವೆ ತಡೆಗೋಡೆ ನಿರ್ಮಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ.

ವಿಜಯಪುರ – ಜಿಲ್ಲೆಯ ಕೋಲ್ಹಾರ ತಾಲೂಕಿನ ಹೊನಗನಹಳ್ಳಿ-ಸವನಳ್ಳಿ ಮಧ್ಯೆ ಹರಿಯುವ ಡೋಣಿ ನದಿ ಹತ್ತಿರ ಇಟ್ಟಿಗೆ ತಯಾರಿಸುತ್ತಿದ್ದ ಐವರನ್ನು ರಕ್ಷಿಸಲಾಗಿದೆ. ಮಹಾರಾಷ್ಟ್ರದ ರಾಯಗಢದ ಮಾಲಗಾಂವ ನಿವಾಸಿಗಳಾದ ರಾಕೇಶ್(3), ಕಮಲು(16), ಕಿರಣ(19), ಸವಿತಾ(27), ಅಮೂಲ ಗೋಪಿನಾಥ ಜಾಧವರ ಎಂಬುವರನ್ನು ವಿಜಯಪುರ ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ ನೇತೃತ್ವದಲ್ಲಿ ರಕ್ಷಿಸಿ, ಆಹಾರ ನೀಡಿ ಮಹಾರಾಷ್ಟ್ರಕ್ಕೆ ಕಳುಹಿಸಲಾಗಿದೆ.

ಬಾಗಲಕೋಟೆ – ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದ್ದು, ಬದಾಮಿ ತಾಲೂಕಿನ ಬನಶಂಕರಿ ದೇವಸ್ಥಾನ ಜಲಾವೃತಗೊಂಡಿದೆ. ದೇವಿ ದರ್ಶನಕ್ಕಾಗಿ ಆಗಮಿಸಿದ ಭಕ್ತರು, ಪರದಾಡಿದ್ದು, ಬದಾಮಿ ಬೆಟ್ಟದ ಅಕ್ಕ-ತಂಗಿ ಜಲಾಪಾತ ಧುಮ್ಮಿಕ್ಕುತ್ತಿದೆ. ಹೀಗಾಗಿ, ಆಗಸ್ಥ್ಯ ತೀರ್ಥ ಹೊಂಡ ಮೈದುಂಬಿಕೊಳ್ಳುತ್ತಿದೆ. ಜಲಪಾತದಿಂದ ಸುರಿಯುವ ನೀರಿನ ಝರಿ ನಯನ ಮನೋಹರವಾಗಿದೆ. ಬೀಳಗಿ ಪಟ್ಟಣದ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣಕ್ಕೂ ನೀರು ನುಗ್ಗಿದೆ. ತಿಕೋಟಾ ತಾಲೂಕಿನ ಕಳ್ಳಕವಟಗಿ ಸಂಗಮನಾಥ ಹಳ್ಳ ತುಂಬಿ ಹರಿಯುತ್ತಿದೆ. ಮೂರ್ನಾಲ್ಕು ವರ್ಷದಿಂದ ಮಳೆ ಬಾರದ ಕಾರಣ ಹಳ್ಳದಲ್ಲಿ ನೀರು ಇರಲಿಲ್ಲ. ರಾತ್ರಿ ಸುರಿದ ಮಳೆಯಿಂದಾಗಿ ಹಳ್ಳದ ಪಕ್ಕದಲ್ಲಿರುವ ಸಂಗಮನಾಥ ದೇವಸ್ಥಾನ ಜಲಾವೃತವಾಗಿದ್ದು, ಗರ್ಭಗುಡಿಯಲ್ಲೂ ಮೊಣಕಾಲಿನವರೆಗೆ ನೀರು ನಿಂತಿತ್ತು. ಹೀಗಾಗಿ, ಹೊರಗಡೆಯಿಂದಲೇ ಪೂಜೆ ನಡೆಸಲಾಯಿತು.

ಬೆಳಗಾವಿ – ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಮೂರು ಕಾರು, ಟ್ರಾಕ್ಟರ್‍ನ ಟ್ರೈಲರ್ ಕೊಚ್ಚಿ ಹೋಗಿದ್ದವು. ಪಟ್ಟಣದ ಭೀಮಾನಗರ ಬಡಾವಣೆಯಲ್ಲಿ ಮನೆಗೆ ನೀರು ನುಗ್ಗಿದ್ದರಿಂದ ಹುಷಾರಿಲ್ಲದೆ ಹಾಸಿಗೆ ಹಿಡಿದಿದ್ದ 82 ವರ್ಷದ ಅಜ್ಜಿ ಭಯದಿಂದ ಪ್ರಾಣಬಿಟ್ಟಿದ್ದಾರೆ. 50 ಹಾಸಿಗೆಯುಳ್ಳ ಆರೋಗ್ಯ ಕೇಂದ್ರ ಸಂಪೂರ್ಣ ಜಲಮಯವಾಗಿದೆ. ಎಲ್ಲ ವಾರ್ಡ್‍ಗಳಿಗೆ ಕೊಳಚೆ ನೀರು ನುಗ್ಗಿ, ದುರ್ವಾಸನೆ ಬರುತ್ತಿದೆ. ಬೆಳಗ್ಗೆ ಬಂದ ಸಿಬ್ಬಂದಿ ಮಳೆಯ ನೀರಿನ ಜೊತೆ ಕೆಸರನ್ನು ಸ್ವಚ್ಛ ಮಾಡಿದ್ದಾರೆ. ವಿದ್ಯುತ್ ಇಲ್ಲದೆ ರೋಗಿಗಳು ಪರದಾಡಿದರು. ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಭೇಟಿ ನೀಡಿ ಪರಿಶೀಲಿಸಿದರು. ಗೆಳೆಯರ ಬಳಗ ಪ್ರಾಥಮಿಕ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಸಂಪೂರ್ಣವಾಗಿ ಜಲಾವೃತವಾಗಿದೆ.

ಧಾರವಾಡ – ಭಾಗದಲ್ಲಿ ನಿನ್ನೆಯಿಂದ ಮಳೆ ಸುರಿಯುತ್ತಿದ್ದು, ನವಲಗುಂದ ತಾಲೂಕಿನ ಬೆಣ್ಣಿಹಳ್ಳಕ್ಕೆ ಏಕಾಏಕಿ ನೀರು ಬಂದಿದೆ. ಮತ್ತಷ್ಟು ಮಳೆಯಾದರೆ ಪಕ್ಕದ ಜಮೀನಿಗೆ ನೀರು ನುಗ್ಗುವ ಸಾಧ್ಯತೆಯಿದೆ.

ಹುಬ್ಬಳ್ಳಿ – ಧಾಜೀಭಾನ್ ಪೇಟೆಯಲ್ಲಿ ಬೈಕ್ ಸವಾರ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಅಶೋಕ್ ನಗರದ ರೈಲ್ವೆ ಸೇತುವೆ ಬಳಿ ಆಟೋ ಮುಳುಗಿದೆ.

ಕೊಪ್ಪಳ – ಜಿಲ್ಲೆಯಾದ್ಯಂತ ಮಳೆ ಜೋರಾಗಿದೆ. ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಬೇವಿನ ಬೀಜ ತುಂಬಲು ಹೊಲಕ್ಕೆ ತೆರಳಿದ್ದ ಅಜ್ಜಿ-ಮೊಮ್ಮಗಳು ವರುಣನ ಆರ್ಭಟದಿಂದ ಹಳ್ಳದಲ್ಲಿ ಸಿಲುಕಿದ್ದರು. ನೀರು ಹೆಚ್ಚಾಗಿ ಭೀತಿಗೊಂಡ ಇಬ್ಬರೂ ಸಹಾಯಕ್ಕೆ ಕೂಗಾಡಿದ್ದಾರೆ. ದಾರಿಹೋಕರು ಧ್ವನಿ ಕೇಳಿಸಿಕೊಂಡು ಅಜ್ಜಿ-ಮೊಮ್ಮಗಳನ್ನು ರಕ್ಷಿಸಿದ್ದಾರೆ. ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಬಳಿ ಹಿರೇಹಳ್ಳ ತುಂಬಿದೆ. ನೀರಿನ ರಭಸಕ್ಕೆ ನಿರ್ಮಾಣ ಹಂತದ ಚೆಕ್ ಡ್ಯಾಂ ಕೊಚ್ಚಿಹೋಗಿದೆ.

ಕಲಬುರಗಿ – ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಧಾರಾಕಾರ ಮಳೆಯಿಂದ ಕಲ್ಲೂರ ಗ್ರಾಮದ ನಾಲೆಯಲ್ಲಿ ಭಾರಿ ಪ್ರಮಾಣದ ನೀರು ಶೇಖರಣೆಯಾಗಿದೆ. ನೀರನ್ನು ನೋಡೋಕೆ ಜನ ಮುಗಿಬಿದ್ದಿದ್ದಾರೆ.

ಬೀದರ್ – ಬಸವ ಕಲ್ಯಾಣ ತಾಲೂಕಿನ ಯಲದಗುಂಡಿ ಗ್ರಾಮದಲ್ಲಿ ನಿನ್ನೆ ದಿಢೀರ್ ಮಳೆಯಾದ ಕಾರಣ ಹೊಲದಿಂದ ಮನೆಗೆ ವಾಪಸಾಗುವಾಗ ಹಳ್ಳದಾಟಲು ಹೋಗಿ ತಾಯಿ ಮಗ ಕೊಚ್ಚಿ ಹೋಗಿದ್ದರು. 15 ವರ್ಷದ ಮಗ ಭಾಗ್ಯವಂತನ ದೇಹ ನಿನ್ನೆಯೇ ಪತ್ತೆಯಾಗಿತ್ತು. 35 ವರ್ಷದ ತಾಯಿ ಅನಿತಾ ಅವರ ದೇಹ ಸುಮಾರು 2 ಕಿ.ಮೀ. ದೂರದಲ್ಲಿ ಇಂದು ಪತ್ತೆಯಾಗಿದೆ. ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ರಾತ್ರಿಯಿಡೀ ಶೋಧಕಾರ್ಯ ನಡೆಸಿದ್ದರು.

ಗದಗ – ಜಿಲ್ಲೆಯಲ್ಲಿ ಇಂದೂ ಮಳೆ ಅಬ್ಬರಿಸಿದ್ದು, ಗದಗ, ಗಜೇಂದ್ರಗಡ, ರೋಣ ತಾಲೂಕಿನಲ್ಲಿ ವರ್ಷಧಾರೆಯಾಗಿದೆ. ಗಜೇಂದ್ರಗಡ ತಾಲೂಕಿನ ಕಳಕಾಪುರದಲ್ಲಿ ಶಾಲೆ, ಅಂಗನವಾಡಿ ಸೇರಿದಂತೆ ಮನೆಗಳಿಗೆ ನೀರು ನುಗ್ಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇತ್ತು. ಸಂಜೆ ಹೊತ್ತಿಗೆ ದಟ್ಟ ಮೋಡ ಆವರಿಸಿತ್ತು.

  

  

Source : WhatsApp & https://publictv.in/rain-karnataka-north-karnataka-today/amp.

leave your comment


Your email address will not be published. Required fields are marked *

Top

Welcome to FOBZA.


Companion for your convenience.


Click here for
Posting Job Opportunities
Finding Dream Job
Career Articles


Close this window for
Businesses Listings
Classifieds Listing
Business News
Emergency Contacts